ಅವಧೂತ ಪರಂಪರೆ
ನಮ್ಮಲ್ಲಿ ಒಂದು ಪರಂಪರೆ ಇದೆ. ಅದೇ ಅವಧೂತ ಪರಂಪರೆ. ಇದರ ಆದಿ ದತ್ತಾತ್ರೇಯರು. ಅವರ ಸಿದ್ಧಾಂತವೇ ದತ್ತಾದ್ವೈತ. ಅದೇ ಅದ್ವೈತದ ಮೂಲ ರೂಪ. ಅವರೇ ರಚಿಸಿದ ಕೃತಿಗಳು ಎರಡು. ಒಂದು ಅವಧೂತ ಗೀತೆ. ಎರಡನೆಯದು ಜೀವನ್ಮುಕ್ತಿ ಗೀತೆ. ದತ್ತಾತ್ರೇಯರ ಉಪದೇಶದ ಪಾರಮ್ಯ ಅಲ್ಲಿ. ತಾತ್ವಿಕ ಶ್ರೇಷ್ಠ ಕೃತಿಗಳೆರಡನ್ನೂ ಮುಮುಕ್ಷುಗಳು ಒಮ್ಮೆಯಾದರೂ ಓದಲೇಬೇಕು.
ಇಂತಹ ದತ್ತ ಪರಂಪರೆ ನಮಗೆ ಹಲವಾರು ಅವಧೂತರನ್ನು ಕೊಟ್ಟಿದೆ.
ಶ್ರೀಪಾದ ಶ್ರೀ ವಲ್ಲಭರು
ಶ್ರೀ ನೃಸಿಂಹ ಸರಸ್ವತಿಗಳು
ಶ್ರೀ ಏಕ ನಾಥರು
ಶ್ರೀ ಮಾಣಿಕ ಪ್ರಭುಗಳ
ಶ್ರೀ ಅಕ್ಕಲ ಕೋಟೆ ಸ್ವಾಮಿಗಳು
ಶ್ರೀ ಶಿರಡೀ ಸಾಯಿಬಾಬ ರವರು
ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು
ಶ್ರೀ ರಮಣ ಮಹರ್ಷಿಗಳು
ಶ್ರೀ ಗೋಂದಾವಲೀ ಬ್ರಹ್ಮಚೈತನ್ಯ ಮಹಾರಾಜರು
ಶ್ರೀ ಬೆಳಧಡಿ ಬ್ರಹ್ಮಾನಂದರು
ಶ್ರೀ ಅಪ್ಪೇ ಮಹಾರಾಜರು
ಶ್ರೀ ಶ್ರೀಧರ ಸ್ವಾಮಿಗಳು
ಶ್ರೀ ಪುಟ್ಟಪರ್ತಿ ಸಾಯಿಬಾಬಾ ರವರು
………… ಹೀಗೆ. ಒಂದೇ ಎರಡೇ ? ಈಗಲೂ ಹಲವಾರು ಅವಧೂತರು ಚಾಲ್ತಿಯಲ್ಲಿದ್ದಾರೆ. ಅಷ್ಟೇಕೆ ನಾನೇ ಬಾಲ್ಯದಲ್ಲಿ ಕಂಡಿದ್ದ “ಚಾಕ್ಲೇಟ್ ತಾತಾ” ಎಂದೇ ಪ್ರಸಿದ್ಧರಾಗಿದ್ದ ನಮ್ಮೂರಿನ ಹನುಮಾವಧೂತರು, ಕೆಲವೇ ವರ್ಷಗಳ ಹಿಂದೆ ಅವರ ಸಖ್ಯವನ್ನನುಭವಿಸಿರುವ ಶ್ರೀ ವೇಂಕಟಾಚಲಾವಧೂತರು ………… ಹೀಗೆ ಸಾಕಷ್ಟು ಮಂದಿಯನ್ನು ಈ ನಾಡು ಕಂಡಿದೆ. ಇವರೆಲ್ಲ ಅವರವರ ಕಾಲದಲ್ಲಿ ಜಗಜ್ಜಾಹೀರಾಗಿದ್ದಾರೆ. ಅವರಿದ್ದ ಕ್ಷೇತ್ರ ಇಂದಿಗೂ ಪುಣ್ಯಕ್ಷೇತ್ರವಾಗಿದೆ. ಇಂದಿಗೂ ಅಲ್ಲಿ ಪವಾಡಗಳು ನಡೆಯುತ್ತಿದೆ. ನಂಬಿದ ಭಕ್ತರಿಗೆ ಅವರ ನಿರಂತರ ಆಶೀರ್ವಾದ ಇಂದಿಗೂ ದಕ್ಕುತ್ತಿದೆ.
ಅವಧೂತರಿಗೆ ಶುಭಾಶುಭಗಳಿಲ್ಲ. ಹೆಚ್ಚು-ಕಡಿಮೆ ಇಲ್ಲ. ಕೀಳು-ಮೇಲುಗಳಿಲ್ಲ. ದಾರಿದ್ರ್ಯ – ಸಿರಿತನದ ವ್ಯತ್ಯಾಸವಿಲ್ಲ. ವಿವಾಹ ಅವಿವಾಹದ ಭೇದವಿಲ್ಲ. ಸಂಸಾರ ಸನ್ಯಾಸಗಳ ಮಿತಿ ಇಲ್ಲ. ಭಕ್ಷ್ಯ ಅಭಕ್ಷ್ಯಗಳಿಲ್ಲ. ಎಂದರೆ ಅವಧೂತನೊಬ್ಬ ಅಮಿತ ; ಅಸಂಗ ; ಅವಿರತ ; ಅನಂತ ; ಅಪಾರ !! ಹೆಂಡತಿ ಇದ್ದೂ ಸಂಸಾರವಿರದಾತ. ಮಕ್ಕಳಿದ್ದೂ ವಂಶವಿರದಾತ. ಸ್ನೇಹಿತರು-ಬಂಧು-ಬಳಗ ………… ಈ ಎಲ್ಲರೂ ಇದ್ದೂ ಯಾರೂ ಇಲ್ಲದಾತ. ಮನೆಯಿದ್ದೂ ಮಠದಲ್ಲಿರುವಾತ. ಹೀಗಾಗಿ ಅವಧೂತ ಎಲ್ಲ ಇದ್ದೂ ಏನೂ ಇರದಾತ ! ಏನೂ ಬೇಡದಾತ. ಎಲ್ಲ ಬಿಟ್ಟಾತ, ಅಂತಹ ಆಶ್ರಮ ತೀಕ್ಷ್ಣ ; ಆಶ್ರಮ ಜ್ಯೇಷ್ಠ, ಆಶ್ರಮ ವಿಶೇಷವೇ ಅವಧೂತಾಶ್ರಮ !!
ನಿರಾಲಂಬೋಪನಿಷತ್ತು ಅವಧೂತನೆಂದರೆ ಯಾರು ಎಂಬುದನ್ನು ಖಚಿತವಾಗಿ ಹೇಳಿಬಿಡುತ್ತದೆ. ನಿರೂಪಣೆಯ ಮುಕ್ತಾಯದಲ್ಲಿ ಆ ಗುಣಲಕ್ಷಣಗಳಿರುವಾತನೇ ಯತಿ ; ಅವನೇ ಸಂನ್ಯಾಸಿ, ಅವನೇ ಮುಕ್ತ ; ಅವನೇ ಪೂಜ್ಯ ; ಅವನೇ ಯೋಗಿ ; ಅವನೇ ಪರಮಹಂಸ ; ಅವನೇ ಅವಧೂತ ; ಅವನೇ ಬ್ರಾಹ್ಮಣ ; ಎಂದೆಲ್ಲ ಕೊಂಡಾಡುತ್ತದೆ. ನಿಜ ಬ್ರಾಹ್ಮಣನೆಂದರೆ ಅವಧೂತನೇ ! ಅಥವಾ ಅವಧೂತ ಲಕ್ಷಣಗಳೇ ಬ್ರಾಹ್ಮಣ ಲಕ್ಷಣಗಳು !
ಉಪನಿಷತ್ತಿನ ವಾಕ್ಯ ನೋಡೋಣವೇ ? “ತತ್ವಮಸ್ಯ, ಅಹಂ ಬ್ರಹ್ಮಾಸ್ಮಿ, ಸರ್ವಂ ಖಲ್ವಿದಂ ಬ್ರಹ್ಮ, ನ ಇಹ ನಾನಾಸ್ತಿ ಕಿಂಚನ, ………… ಇತ್ಯಾದಿ ಮಹಾ ವಾಕ್ಯ, ಅರ್ಥಾನುಭವ ಜ್ಞಾನಾತ್ ಬ್ರಹ್ಮ ಪದ ಅಹಂ ಅಸ್ಮಿ / ಇತಿ ನಿಶ್ಚಿತ್ಯ ನಿರ್ವಿಕಲ್ಪಕ ಸಮಾಧಿನಾ ಸ್ವತಂತ್ರ ಯತಿಶ್ಚರತಿ / ಸ ಸಂನ್ಯಾಸೀ ; ಸ ಮುಕ್ತಃ ; ಸಪೂಜ್ಯಃ ; ಸಹ ಯೋಗೀ ; ಸ ಪರಮಹಂಸಃ ; ಸ ಅವಧೂತಃ ; ಸ ಬ್ರಾಹ್ಮಣ ಇತಿ ………… “
ಇದೊಂದು ಶುದ್ಧ ಅದ್ವೈತ ನಿರೂಪಣೆಯೇ. ಅದ್ವೈತ ಸಿದ್ಧಾಂತ ಒಪ್ಪಿರುವ / ಆಧರಿಸಿರುವ ಮಹಾ ವಾಕ್ಯಗಳು ನಾಲಕ್ಕು. ಅವೇ ತತ್ವಮಸಿ, ಅಹಂ ಬ್ರಹ್ಮಾಸ್ಮಿ, ಪ್ರಜ್ಞಾನಂ ಬ್ರಹ್ಮ ಮತ್ತು ಅಯಮಾತ್ಮಾ ಬ್ರಹ್ಮ. ಇವುಗಳ ಬೆಂಗಾವಲಿಗೆ ಸರ್ವಂ ಖಲ್ಪಿದಂ ಬ್ರಹ್ಮ, ನ ಇಹ ನಾನಾಸ್ತಿ ಕಿಂಚನ ………… ಇತ್ಯಾದಿ ವೇದೋಕ್ತಿಗಳು. ಈ ಎಲ್ಲ ಉಪದೇಶಗಳನ್ನೂ ಅನುಭವಕ್ಕೆ ತೆಗೆದುಕೊಂಡು ತಾನೇ ಬ್ರಹ್ಮನಾಗಿದ್ದೇನೆಂದು ನಿಶ್ಚಿತವಾಗಿ, ನಿರ್ವಿಕಲ್ಪವಾಗಿ ಸದಾ ಸಮಾಧಿಯ ಸಾರೋಗ್ಯದಲ್ಲಿದ್ದು ಸ್ವತಂತ್ರವಾಗಿರುವಾತನೇ ಅವಧೂತ …………
*****
ನಾವು ಈಗಾಗಲೇ ಕಂಡ ಅವಧೂತ ಪರಂಪರೆಯ ಒಂದು ಶಾಖೆ ಚನ್ನರಾಯಪಟ್ಟಣ, ಅರಸೀಕೆರೆ ………… ಈ ಪ್ರಾಂತ್ಯಗಳಲ್ಲಿ ಅರಳಿತು. ಇದರ ಆದಿಯನ್ನು ನಾವು ಕಾಣುವುದು ನಂಜುಂಡ ಶ್ರೌತ್ರಿಗಳಲ್ಲಿ. ಸ್ವಾತಂತ್ರ್ಯದ ಬೆಂಕಿ ದೇಸವನ್ನೇ ಸುಡುತ್ತಿದ್ದಾಗ ಇವರೂ ಮುಂಚೂಣಿಯಲ್ಲಿ “ಭಾರತಮಾತಾ ಕೀ ಜೈ” ಎಂದವರೇ ! ಮಂಡ್ಯದ ಸೆರೆಮನೆಯಲ್ಲಿ ಹಲ ವರ್ಷಗಳು ಸನಾತನ ಧರ್ಮದ ಜಪ ಮಾಡಿದವರು. ಬಂಧನದಲ್ಲಿದ್ದರೂ ಅವರ ಶಿಸ್ತಿನ ಜೀವನ ಕಂಡ ಆಂಗ್ಲ ಅಧಿಕಾರಿಗಳು ಬೆರಗಾಗಿ, “ಅವರಿಗೇನಾದರೂ ಅನುಕೂಲ ಮಾಡಿಕೊಡಬೇಕೆ” ಎಂದು ಕೇಳಿದಾಗ ಅವರು ಕೇಳಿದ್ದೇನು ಗೊತ್ತೆ ? “ತಮ್ಮ ಸಹೃದಯಕ್ಕೆ ವಂದನೆಗಳು. ನೀವು ನಿಜವಾಗಿಯೂ ಸಹಾಯ ಮಾಡುವುದೇ ಆದರೆ, ಮಹಾತ್ಮ ಗಾಂಧೀಜಿಯವರ ಭಗವದ್ಗೀತೆಯ ಅನುವಾದ ಹಾಗೂ ಟಿಳಕರ ಗೀತಾ ರಹಸ್ಯದ ಅನುವಾದಗಳನ್ನು ತರಿಸಿಕೊಡಿ” ಎಂದು ಕೇಳಿದ್ದರು !! ಸಮರ್ಥ ಮಾಂತ್ರಿಕರಾಗಿದ್ದ ಅವರನ್ನು ಅವರೆಂತು ಸೆರೆಯಲ್ಲಿಟ್ಟಿದ್ದಾರೆ ? ಮಂತ್ರ ಪ್ರಭಾವ ಬೀರಿ ಹೊರಹೋಗಬಹುದಲ್ಲಾ ಎಂದಾಗ “ಇದು ಪೂರ್ವಜನ್ಮದ ಫಲ. ನಾನು ಇಂತಿಷ್ಟು ಕಾಲ ಸೆರೆಯಲ್ಲಿರಬೇಕಿದೆ. ಆ ಅವಧಿ ಮುಗಿದ ಮೇಲೆ ಯಾರೂ ನನ್ನನ್ನು ಹಿಡಿದಿಡಲಾಗೊಲ್ಲ ! ಬಹುಶಃ ಐದು ತಿಂಗಳಿಗೆ ನನ್ನ ಪ್ರಾಚೀನ ಮುಗಿಯುತ್ತದೆ. ಅಲ್ಲಿಗೆ ಮುಗಿಯಿತು. ಹೊರಕ್ಕೆ ಹೋಗುವೆ. ಹನುಮಂತನೂ ಬ್ರಹ್ಮಾಸ್ತ್ರಕ್ಕೆ ಬೆಲೆಕೊಟ್ಟು ಕಟ್ಟು ಬೀಳಲಿಲ್ಲವೆ ?” ಎಂದರು. ಅವರಂದಂತೆ ಅಂದಿಗೆ ಸರಿಯಾಗಿ ನಾಲಕ್ಕು ತಿಂಗಳು ಹನ್ನೆರಡು ದಿನಗಳಿಗೆ ಅವರ ಬಿಡುಗಡೆಯಾಯಿತು !
ಅಂದಿಗೆ ಸಾಮವೇದದಲ್ಲಿ ನಿಷ್ಣಾತರಾಗಿದ್ದವರು ಬ್ರಹ್ಮರ್ಷಿ ಶ್ಯಾಮ ಶ್ರೌತ್ರಿಗಳು. ಅವರಲ್ಲಿ ಇವರಿಗೆ ಸಾಮವೇದ ಘನಾಂತ ಪಾಠವಾಯಿತು. ಅದರಲ್ಲಿಯೂ ರಥಂತರ ಸಾಮವನ್ನು ವಿನಿಯೋಗ ಮಾಡಿದರೆ, ಯಜಮಾನನಿಗೆ ಬಂದಿದ್ದ ರೋಗ ನಿವಾರಣೆಯಾದಂತೆಯೇ ! ಬ್ರಹ್ಮ ಪಟ್ಟದಲ್ಲಿ ಅವರು ಕುಳಿತರೆಂದರೆ ಯಜ್ಞ ಶುದ್ಧಿಯೂ ಹೌದು ! ಉಳಿದ ಋತ್ವಿಜರಿಗೆ ಪ್ರೌಢ ಪರೀಕ್ಷೆಯೂ ಹೌದು !! ಶ್ರೌತ್ರಿ ಎಂಬುದಕ್ಕೆ ಅನ್ವಯವಾಗಿ ಚತುರ್ವೇದಗಳಲ್ಲೂ ಘನಪಾಠ್ಯಾಧಿಕಾರವಿತ್ತು. ನಂಜುಂಡ ಶ್ರೌತ್ರಿಗಳಿಂದಲೇ ಪಾಠ ಕಲಿಯುವುದು ಅಂದಿಗೆ ಒಂದು ಅತಿ ಹೆಮ್ಮೆಯ ವಿಷಯವಾಗಿತ್ತು ! ಭೂತ ಭವಿಷ್ಯದ್ವರ್ತಮಾನಗಳನ್ನೂ ಬಗೆದು ನೋಡುವ, ಕಾಲ ತ್ರಯವನ್ನೂ ಆಕರ್ಷಿಸಿದ್ದ ಪರಮ ಜ್ಞಾನಿಗಳು ಅವರು. ಎಂದರೆ ಮೂರು ಕಾಲಗಳಲ್ಲೂ ವಿಹರಿಸಬಲ್ಲವರು ಅವರು ಆಗಿದ್ದಿದ್ದರಿಂದಲೇ, ಅಂದಿಗೆ ಅವರನ್ನು ಮೀರಿಸುವ ಜ್ಯೋತಿಷಿಗಳಾರು ಇರಲೇ ಇಲ್ಲ ! ಆದರೊಂದೇ ಭಯ ! ಅವರ ಬಾಯಿಂದ ಏನು ಬಂದರೂ ಅದು ನಡೆದೇ ತೀರುವುದೆಂಬ ಸಂಗತಿ ಜನಜನಿತವಾಗಿ, ಏನು ಹೇಳಿಬಿಡುವರೋ ಎಂದು ಅವರ ಮುಂದೆ ಹೋಗಲೇ ಹೆದರಿಕೆ!! ಸುಮಾರು ಋತ್ವಿಜರಿಗೆ ನಮಕ-ಚಮಕಗಳು ವಾಚೋವಿಧೇಯವಾಗಿರುವುದು ಸಹಜ. ಆದರೆ ಈ ಶ್ರೌತ್ರಿಗಳದೇ ಬೇರೆ ಬಗೆ. ಇವರು ರುದ್ರ ಪ್ರಶ್ನೆ ಬಲ್ಲವರಷ್ಟೇ ಅಲ್ಲ ; ರುದ್ರೋಪಾಸಕರಾಗಿ, ಬಯಸಿದಾಗ ರುದ್ರಶಕ್ತಿಯನ್ನು ಆವಾಹನೆ ಮಾಡಿಕೊಳ್ಳಬಲ್ಲವರಾಗಿದ್ದರು !! ಆಗ ಅವರು ನಡೆದು ಬಂದರೆ ಬೆಂಕಿ ಮಾನವ ನಡೆದು ಬಂದಂತೆಯೇ ! ಬಾಯ್ಬಿಟ್ಟರೆ ಅದು ರುದ್ರ ಡಮರುಗ ಡಿಂಡಿಮವೇ ! ರುದ್ರ ಗಾಂಭೀರ್ಯವೆಷ್ಟು ರುದ್ರ ಮನೋಹರವೋ, ಅಷ್ಟೇ ಸಾತ್ವಿಕ ಸುಧಾ ಸಾರ ತರಂಗಿಣಿಯಾಗುತ್ತಿದ್ದರು. ಸಾಮದಲ್ಲಿ ಶಿವನನ್ನೊಲಿಸಲು ಪ್ರಾರಂಭಿಸಿದಾಗ ! “ಕೇಳಿದರೆ ಸಾಮವೇದವನ್ನು ನಂಜುಂಡ ಶ್ರೌತ್ರಿಗಳಲ್ಲಿ ಕೇಳಬೇಕು” ಎಂಬ ನಾಣ್ಣುಡಿ ಪ್ರಸಿದ್ಧವಾಗಿತ್ತು. ಬೆಟ್ಟು ತೋರಿದ ದಿಕ್ಕಿಗೆ ಹೋಗಿ ಕಳೆದ ವಸ್ತುಗಳನ್ನು ಪಡೆದವರೆಷ್ಟೋ! ಮಂತ್ರಿಸಿ ಕೊಟ್ಟ ಭಸ್ಮ ಧರಿಸಿ ರೋಗವನ್ನೋಡಿಸಿದವರೆಷ್ಟೋ ! ಬೇಡವೆಂದದ್ದನ್ನು ಮಾಡಿ ಕೈ ಕಾಲು ಸುಟ್ಟುಕೊಂಡವರೆಷ್ಟೋ ! ಆಶೀರ್ವಾದದಿಂದ ಹಣದ ರಾಶಿಯನ್ನು ಎಣಿಸಿದ ಅಂಗಡಿಗಳೆಷ್ಟೋ ! ನೂರಾರು ಮೂಟೆ ಫಸಲು ಬಾಚಿಕೊಂಡವರೆಷ್ಟೋ ! ಕ್ರೂರಗ್ರಹ ದೃಷ್ಟಿಯಿಂದ ಪಾರಾದವರೆಷ್ಟೋ ! ಶತ್ರು ಕಾಟದಿಂದ ಹೊರಬಂದವರೆಷ್ಟೋ ! ಲೆಕ್ಕವಿಟ್ಟವರಾರು !!
*****
ಮುಂದೆ ನಂಜುಂಡ ಶ್ರೌತ್ರಿಗಳ ಪಟ್ಟದಲ್ಲಿ ಕುಳಿತವರು ಕಪ್ಪಣ್ಣ ದೃಷ್ಟಿ ಶ್ರೌತ್ರಿಗಳು. ಪೂರ್ವಜರನ್ನು ಮೀರಿಸಿದ ಪವಾಡ ಪುರುಷರಿವರು ! ಸುಂದರವಾಗಿದ್ದ ಇವರಿಗೆ ದೃಷ್ಟಯಾಗಬಾರದೆಂದು “ಕಪ್ಪಣ್ಣ” ಎಂದು ಹೆಸರಿಟ್ಟರಂತೆ ! ಅಂತೇ ಕಪ್ಪಣ್ಣ ಎಂದರೆ ಕೃಷ್ಣನೆಂದೂ ಅರ್ಥೈಸುತ್ತಿದ್ದರಾಗ ! ನಿಜವೆಂಬಂತೆ ಕೃಷ್ಣಾರಾಧಕರು ಅವರು !! ಸಾಧನೆಯಲ್ಲಿ ಖೇಚರ ಪ್ರತಿಷ್ಠಿತರು – ಹರಿವ ನದಿಯಲ್ಲಿ ಮೂಗು ಹಿಡಿದು ಕುಳಿತರೆ ದಿನಗಳೇ ಕಳೆದುಹೋಗುತ್ತಿದ್ದುವು. ಉಂಗುಟದ ಮೇಲೆ ಮಾಧ್ಯಾನ್ಹಿಕದಲ್ಲಿ ನಿಂತರೆ, ಅಸ್ತಮಿಸಿದಾಗಲೇ ನೆಲಕ್ಕೆ ಪಾದ ಊರುತ್ತಿತ್ತು !! ಎರಡು ಮೂರು ಸೇರು ಅಕ್ಕಿಯ ಅನ್ನ, ಮೊರ ತುಂಬಿದ ಹೋಳಿಗೆ, ಡಬರಿಗೆ ಪಾಯಸ, ಅರವತ್ತಪ್ಪತ್ತು ಉಂಡೆಗಳನ್ನೆಲ್ಲ ಒಂದೇ ಊಟದಲ್ಲಿ ಜಠರಾಗ್ನಿಗೆ ನಿವೇದಿಸಬಲ್ಲ ಕಪ್ಪಣ್ಣ ಶ್ರೌತ್ರಿಗಳು ಏಕಾದಶಿಯಂದು ವಿಷ್ಣುವಿನ ಹೆಸರು ಹೇಳಿ ನಿರಾಹಾರ ದೀಕ್ಷೆ ತೆಗೆದುಕೊಡರೆ ಬರುವ ಅಲ್ಲ ; ಮುಂದಿನ ಏಕಾದಶಿಯ ತನಕ ಬಿಸಿನೀರು ಬಿಟ್ಟರೆ ಮತ್ತೇನನ್ನೂ ತೆಗೆದುಕೊಳ್ಳುತ್ತಿರಲಿಲ್ಲ ! ಹಾಗೆಂದು ಜನರ ಭೇಟಿ, ಹತ್ತಾರು ಮೈಲಿಗಳ ಓಡಾಟ, ಯಜ್ಞ ಭಾಗಸ್ವಾಮಿತ್ವ ; ಪಂಡಿತ ಮಂಡಲಿಯ ಅಧ್ಯಕ್ಷೀಯತೆ, ರಾಮಾಯಣ ಉಪನ್ಯಾಸ ಕೈಂಕರ್ಯ – ಇವ್ಯಾವುದನ್ನೂ ತಪ್ಪುತ್ತಿರಲಿಲ್ಲ !!!
ಅರಮನೆ ಗುರುಮನೆಗಳ ನಿಕಟ ಸಂಬಂಧ ಕಪ್ಪಣ್ಣ ಶ್ರೌತ್ರಿಗಳಿಗೆ. ಮಹಾರಾಜರಿಗೆ ಒಮ್ಮೆ ನಿವಾರಣೆಯಾಗದ ಕ್ರೂರ ಗ್ರಹ ಬಾಧೆಯಿಂದ ಉದರ ಶೂಲೆಯೊಂದು ಅಮರಿತು ! ವೈದ್ಯರಿಗಾಗಲೀ, ವೈದಿಕರಿಗಾಗಲೀ, ಮಾಂತ್ರಿಕರಿಗಾಗಲೀ ಅದು ಬಗ್ಗಲಿಲ್ಲ ! ಶ್ರೌತ್ರಿಗಳಲ್ಲಿ ಪ್ರಾರ್ಥನೆ ಪ್ರಾರಬ್ಧವಾದ್ದರಿಂದ ಅನುಭವಿಸಲೇಬೇಕೆಂದರು ! “ಬೇರೆ ಮಾರ್ಗವೇ ಇಲ್ಲವೇ” ಎಂದು ಅಂಗಲಾಚಿದಾಗ, ಯಾರಾದರೂ ಸ್ವೀಕರಿಸಿದರೆ ತಾವು ವರ್ಗಾಯಿಸುವುದಾಗಿ ಹೇಳಿದರು. ರಾಜರ ಕಷ್ಟವನ್ನು ಕಂಡಿದ್ದ ಯಾರೂ ಆ ನೋವನ್ನು ತಿಳಿದೂ ತಿಳಿದೂ ತೆಗೆದುಕೊಳ್ಳಲು ಸಿದ್ಧರಾಗಲೇ ಇಲ್ಲ! ರಾಜರು ತೋರಿಸಿದ ಹಣವಾಗಲೀ, ಜಮೀನಾಗಲೀ, ಮನೆಯಾಗಲೀ, ಭೋಗಗಳಾಗಲೀ … ಯಾವುದೂ ಕೆಲಸ ಮಾಡಲಿಲ್ಲ ! ಕೊನೆಗೆ ಕಪ್ಪಣ್ಣನವರು ಹೇಳಿದರು. “ಪೃಥ್ವೀಪತಿಗಳು ಈ ರೀತಿ ಯಾಚಿಸುವುದು ದೀನರಾಗಿ ನೋಯುವುದೂ, ರೋಗಿಗಳಾಗಿ ಅಸಮರ್ಥರಾಗಿರುವುದೂ, ಅದೇ ಕಾಲಕ್ಕೆ ಹೊಂಚುವ ವೈರಿ ರಾಜರು ಯುದ್ಧ ಘೋಷಿಸುವುದೂ, ಇವೆಲ್ಲ ರಾಷ್ಟ್ರಪ್ರೇಮವುಳ್ಳ ಯಾರಿಗೂ ಸಮ್ಮತಿಸದು. ಆದ ಕಾರಣ ನಿಮ್ಮ ಖಾಯಿಲೆಯನ್ನು ನಾನೇ ಆವಾಹಿಸಿಕೊಳ್ಳುವೆ !” ಎಂದುಬಿಟ್ಟರು !! ಮರುಕ್ಷಣವೇ ಬಂಗಾರದ ತಂತಿಯನ್ನು ಮಹಾರಾಜರ ಎಡಗೈಗೂ, ತಮ್ಮ ಬಲಗೈಗೂ ಬಿಗಿಸಿ, ರೋಗ ಸ್ವೀಕಾರ ಮಂತ್ರವನ್ನು ಪಠಿಸುತ್ತಿದ್ದಂತೆಯೇ ಮಹಾರಾಜರ ನೋವು ಕಡಿಮೆಯಾಗಲಿಕ್ಕೆ ಶುರುವಾಯಿತು ! ಘಂಟೆ ಕಾಲ ನಡೆದ ಈ ಕಾರ್ಯಕ್ರಮದ ಕೊನೆಗೆ ಮಹಾರಾಜರು ಸಂಪೂರ್ಣ ಗೆಲುವಾದರು !! ಆದರೆ ಶ್ರೌತ್ರಿಗಳ ಮುಖ ಕಪ್ಪಿಟ್ಟಿತು ! ರಾಜರು ಸಂತೋಷಗೊಂಡರೂ ಶ್ರೌತ್ರಿಗಳಲ್ಲಾದ ಬದಲಾವಣೆ ಗಮನಿಸಿ ನೊಂದುಕೊಂಡರು. “ನೀವು ಒದ್ದಾಡಬೇಡಿ ! ಇಂದಿನಿಂದ ಇಪ್ಪತ್ತೊಂದು ದಿನಗಳ ಕಾಲ ಪಂಚಾಗ್ನಿ ಮಧ್ಯದಲ್ಲಿ ಸೂರ್ಯಾರಾಧನೆ ಮಾಡುವೆ. ಅವನ ಕಟಾಕ್ಷದಿಂದ ನಾನು ನಿರೋಗಿಯಾಗುವೆ” ಎಂದು ಸಮಾಧಾನ ಮಾಡಿದರು. ಅಷ್ಟೂ ದಿನಗಳೂ ನಡೆದ ಯಜ್ಞದಲ್ಲಿ ಸೂರ್ಯೋಪಾಸನೆ ಅಭೂತವಾಗಿ ವಿಜೃಂಭಿಸಿತು. ಅರಮನೆಯ ಮೂಲೆ ಮೂಲೆಯಲ್ಲೂ ಸೂರ್ಯ ಮಂತ್ರ ಅನುರಣನಗೊಳ್ಳುತ್ತಿತ್ತು.
ವೈಕರ್ತನೋ ವಿವಸ್ವಾಂಶ್ಚ ಮಾರ್ತಾಂಡೋ ಭಾಸ್ಕರೋ ರವಿಃ
ಲೋಕ ಪ್ರಕಾಶಕಃ ಶ್ರೀಮಾನ್ ಲೋಕ ಚಕ್ಷುಗ್ರ್ರಹೇಶ್ವರಃ
ಲೋಕ ಸಾಕ್ಷೀ ತ್ರಿಲೋಕೇಶಃ ಕರ್ತಾ ಹರ್ತಾ ತಮಿಸ್ರಹಾ
ತಪನೋ ತಾಪನಶ್ಚೈವ ಶುಚಿಃ ಸಪ್ತಾಶ್ವ ವಾಹನಃ
ಗಭಸ್ತಿ ಹಸ್ತೋ ಬ್ರಹ್ಮಾಚ ಸರ್ವ ದೇವ ನಮಸ್ಕøತಃ
ಏಕವಿಂಶತಿರಿತ್ಯೇಷಃ ಸ್ತವ ಇಷ್ಟಃ ಸದಾ ಮಮ
*****
ಕೃತಜ್ಞತೆಯಿಂದ ಬಾಗಿಹೋಗಿದ್ದ ರಾಜರು ದೆದೀಪ್ಯಮಾನರಾಗಿ ಯಾಗಾಂತ್ಯದ ಅವಭೃತ ಸ್ನಾನದಿಂದ ತೇಜಸ್ವಿಯಾಗಿ ಮುಂದೆ ನಿಂತಿದ್ದ ಕಪ್ಪಣ್ಣ ಶ್ರೌತ್ರಿಗಳಿಗೆ ಸಾಷ್ಟಾಂಗ ವಂದನೆ ಮಾಡಿ “ಸ್ವಾಮಿನ್, ನಾನು ಯಾವಜ್ಜೀವ ತಮಗೆ ಕೃತಜ್ಞನಾಗಿದ್ದೇನೆ. ತಮ್ಮ ಈ ಉಪಕಾರಕ್ಕೆ ನಾನು ಏನು ಕೊಟ್ಟರೂ ಕಡಿಮೆಯೇ ! ಆದರೂ ತಾವಿರುವ ಕೈಗೇನ ಹಳ್ಳಿಯನ್ನು ತಮಗೆ ದಾನ ಮಾಡುತ್ತಿದ್ದೇನೆ. ತಾವು ಬೊಕ್ಕಸಕ್ಕೆ ಯಾವ ವಾರ್ಷಿಕ ಸುಂಕವನ್ನೂ ಕಟ್ಟಬೇಕಿಲ್ಲ. ಹತ್ತು ಸಾವಿರದೊಂದು ಸ್ವರ್ಣ ವರಹಗಳಿಂದ ತಮಗೆ ಸ್ವರ್ಣಾಭಿಷೇಕ ಮಾಡುತ್ತೇನೆ. ಇವೆಲ್ಲ ಲೌಕಿಕವಾಗಿ ಬಹುಬೇಗ ಮಾಸಿ ಹೋಗುತ್ತವೆ. ಆದ್ದರಿಂದ ಎಂದೆಂದಿಗೂ ಉಳಿಯುವ ಬಿರುದೊಂದನ್ನು ಘೋಷಿಸುತ್ತೇನೆ. ಅದೇ ಇಂದಿನಿಂದ ತಾವೇ ನಮಗೆ, ನಮ್ಮ ರಾಜ್ಯಕ್ಕೆ ಜಗದ್ಗುರುಗಳು ! ಜಗದ್ಗುರು ಕಪ್ಪಣ್ಣ ಶ್ರೌತ್ರಿಗಳಿಗೆ ಜಯವಾಗಲಿ !!” ಎಂದು ಘೋಷಿಸಿದಾಗ ಅರಮನೆಯೇ ಮಾರ್ದನಿಮಾಡಿತು !!
ಜಗನ್ನಾಥ ದೇವಾಲಯವೊಂದರ ಅಭಿವೃದ್ಧಿಯನ್ನು ಕಂಡು ಕುಗ್ಗಿಹೋದ ವೈರಿಗಳು ಅಭಿಚಾರಕ್ರಿಯೆಯನ್ನು ಮಾಡಿ ಅದರ ತೇಜಸ್ಸನ್ನು ಅಪಹರಿಸಿದ್ದರು. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಕುಗ್ಗಿತು. ಮೂರ್ತಿಗಳು ಮೊಂಕಾದವು. ಆಡಳಿತ ಮಂಡಳಿಯವರಿಗೆ ಅನಿಷ್ಠಗಳಾಗುತ್ತಿದ್ದವು. ಶ್ರೌತ್ರಿಗಳಲ್ಲಿ ಶರಣಾಗತರಾದಾಗ ಗುಡಿಯನ್ನು ಪರಿಶೀಲಿಸಿ, ಕೇರಳದ ಮಾಂತ್ರಿಕರ ಮೋಡಿಯನ್ನು ಗುರ್ತಿಸಿ, ಅದನ್ನು ಪರಿಹರಿಸಿ, ಕಳಾಕರ್ಷಣ ಮಾಡಿ, ಕುಂಭಾಭಿಷೇಕವನ್ನು ಮಾಡಿಸಿದ ಮೇಲೆ ಕೆಲವೇ ವಾರಗಳಲ್ಲಿ ಜನರ ಸರತಿಯ ಸಾಲು ಹಗಲಿರುಳು ಇರುತ್ತಿತ್ತು !! ಮಹಾ ಸಂತಸದಿಂದ ಬೀಗಿದ ಆಡಳಿತ ಮಂಡಳಿ, ಆನಂದಪುರೀ ಸ್ವಾಮಿಗಳಿಂದ ಭೂರಿ ಸನ್ಮಾನ ಮಾಡಿಸಿ ಚಿನ್ನದ ತೋಡಾ ತೊಡಿಸಿ, “ಜಗನ್ನಾಥ ಗುರು” ವೆಂಬ ಬಿರುದನ್ನು ಕೊಟ್ಟರು. ಅಂದಿನಿಂದ ಕಪ್ಪಣ್ಣ ಶ್ರೌತ್ರಿಗಳಿಗೆ “ಜಗದ್ಗುರು ಜಗನ್ನಾಥಗುರು ಸದ್ಗುರು ಕಪ್ಪಣ್ಣ ಶ್ರೌತ್ರಿಗಳಿಗೆ ಜಯವಾಗಲಿ” ಎಂಬ ಉದ್ಗಾರ ಶುರುವಾಯಿತು !
ವಿಷ್ಣುತೀರ್ಥರೆಂಬ ಯತಿಗಳು ಅಂದಿಗೆ ಅತಿ ಪ್ರಸಿದ್ಧ ಸನ್ಯಾಸಿಗಳು. ಭಾರತಾದ್ಯಂತ ಸುತ್ತಿದವರು. ಹಲವಾರು ದೇಗುಲ ಪ್ರತಿಷ್ಠೆ ಮಾಡಿದವರು. ಮಹಾ ವಾಗ್ಮಿಗಳು. ಅದ್ವೈತ ಸಿದ್ಧಾಂತದಲ್ಲಿ ನಿಸ್ಸೀಮರು. ಅವರ ವಿದ್ವತ್ ಸಭೆಗಳಲ್ಲಿ ಜನರು ಕಿಕ್ಕಿರಿಯುತ್ತಿದ್ದರು. ಅದ್ವೈತ ಪ್ರಚಾರದ ಹಿನ್ನೆಲೆಯಲ್ಲಿ, ಅವರ ಪ್ರವಚನಗಳ ಪ್ರಭಾವದಿಂದ ಉಳಿದವರು ತತ್ತರಿಸುತ್ತಿದ್ದರು / ವೇದಿಕೆಯಲ್ಲಿ ವಿಷ್ಣುತೀರ್ಥರನ್ನು ಎದುರಿಸುವ / ಮೀರಿಸುವ ಎದೆಗಾರಿಕೆ ಯಾರಿಗೂ ಇರಲಿಲ್ಲ. ಏನಾದರೂ ಮಾಡಿ ಅವರನ್ನು ತುಳಿಯಲು ಹಂಚಿಕೆ ಹಾಕಿ ಆಹಾರದಲ್ಲಿ ನಿಧಾನ ವಿಷ ಬೆರೆಸಿದರು ಶತ್ರುಗಳು !!
ದಿನದಿನಕ್ಕೆ ಕೃಶರಾಗುತ್ತ ಹೋದರು ವಿಷ್ಣುತೀರ್ಥರು. ಸಭೆಗಳಲ್ಲಿನ ಅವರ ಪ್ರಖರತೆ ಕಡಿಮೆಯಾಯಿತು. ಆರೋಗ್ಯ ಹಾಳಾಯಿತು. ದೇಹದಲ್ಲಿ ನಿಶ್ಯಕ್ತಿ ಏರ್ಪಟ್ಟಿತು. ದಿನದಿಂದ ದಿನಕ್ಕೆ ಕ್ಷಯರೋಗಿಯಂತೆ ಕೃಶಿಸತೊಡಗಿದರು. ಆ ಕಾಲದಲ್ಲಿ ಅವರು ಹೊಳೇನರಸೀಪುರದ ಸಂಚಾರದಲ್ಲಿದ್ದರು. ಯಾರೋ ಹೇಳಿದರು ಮಹಾರಾಜರಿಗೆ ಬಂದಿದ್ದ ಗ್ರಹಬಾಧೆಯನ್ನು ಕಪ್ಪಣ್ಣ ಶ್ರೌತ್ರಿಗಳು ಕಳೆದ ವಿಷಯ. ನೇರವಾಗಿ ವಿಷ್ಣುತೀರ್ಥರು ಶ್ರೌತ್ರಿಗಳಲ್ಲಿಗೆ ಬಂದರು. ತಮಗೆ ಆರೋಗ್ಯ ಪ್ರದಾನ ಮಾಡುವಂತೆ ಬೇಡಿದರು. ಕಪ್ಪಣ್ಣರಿಗೆ ಮಂತ್ರ ವಿದ್ಯೆಯಲ್ಲಿ ಅಪಾರ ಪರಿಣತಿ. ಜೊತೆಗೆ ದಿಗ್ಭಂದನ ವಿದ್ಯೆಯೂ ಕರಗತ. ಮಂಡಲ ಪೂರಾ ಅವರನ್ನು ಎಂಟು ಚಕ್ರಗಳಿಂದ ಕೂಡಿದ ಸರ್ವರೋಗಹರ ಚಕ್ರದಲ್ಲಿ ಕೂಡಿಸಿ, ಕೌಲಿನೀ, ಸರ್ವೇಶೀ, ಜಯಿನೀ, ಅರುಣಾ, ವಿಮಲಾ, ಮೋದಿನಿ, ಕಾಮೇಶೀ ಹಾಗೂ ವಶಿನೀ ಎಂಬ ವಶಿನ್ಯಾದಿ ದೇವತೆಗಳ ಬೀಜಮಂತ್ರಗಳನ್ನು ಪ್ರಯೋಗ ಮಾಡಿ, ಶ್ರೀ ಚಕ್ರ ಪೂಜೆಯನ್ನು ಮಾಡಿಸಿ, ಹಾಲಾಹಲವನ್ನೇ ಪಾನಮಾಡಿ ಜಗತ್ತನ್ನೇ ರಕ್ಷಿಸಿದ ಮೃತ್ಯುಂಜಯ ಮಹಾಮಂತ್ರದಿಂದ ದೇಹ ಹೊಕ್ಕಿದ್ದ ವಿಷವನ್ನೆಲ್ಲ ವಪನ ಮಾಡಿಸಿ, ವಿಷ್ಣುತೀರ್ಥರನ್ನು ನವಜವ್ವನಿಗರನ್ನಾಗಿ ಮಾಡಿಬಿಟ್ಟರು ಕಪ್ಪಣ್ಣ ಶ್ರೌತ್ರಿಗಳು. ಆನಂದದಿಂದ ಆಶ್ರಮ ಮರ್ಯಾದೆಯನ್ನೂ ಮರೆತು ವಿಷ್ಣುತೀರ್ಥರು ಕಪ್ಪಣ್ಣ ಶ್ರೌತ್ರಿಗಳನ್ನು ತಮ್ಮ ಪೀಠದಲ್ಲೇ ಕೂಡಿಸಿ ಪೂಜೆ ಮಾಡಿ, ಅವರಿಗೆ “ಜಗವಿಷ್ಣು ಗುರು” ಎಂಬ ಬಿರುದನ್ನು ದಯ ಪಾಲಿಸಿದರು !!
ಈ ಮೂರು ಬಿರುದುಗಳೂ ಒಂದಾಗಿ ಇಂದಿಗೂ ಅವರ ಆಶ್ರಮದಲ್ಲಿ ಪ್ರಾತಃ ಸಂಧ್ಯಾ ಕಾಲಗಳಲ್ಲಿ,
ಜಗದ್ಗುರು ಜಗನ್ನಾಥ ಗುರು ಜಗ ವಿಷ್ಣು ಗುರು ಕಪ್ಪಣ್ಣ ಶಾಸ್ತ್ರಿ ಸದ್ಗುರುವೇ ನಮಃ ||
ಎಂಬ ಸ್ತುತಿಯಾಗಿ ಮಾರ್ಮೊಳಗುತ್ತಿದೆ.
ಶ್ರೌತ್ರಿ ಹೋಗಿ ಶಾಸ್ತ್ರಿಯಾದುದು !! :-
ಇವೆಲ್ಲ ಅವರಿಗೆ ಐವತ್ತೈದು ವರ್ಷಗಳೊಳಗೆ ನಡೆದ ಮಹಾನ್ ಘಟನೆಗಳು. ಆದರೆ ಐವತ್ತಾರನೆಯ ವಯಸ್ಸಿನಲ್ಲಿ ಅದೇನಾಯಿತೋ, ಎಲ್ಲ ಲೌಕಿಕಗಳ ಹಂಗನ್ನೂ ಹರಿದುಬಿಟ್ಟರು !! ವಾಚೋವಿಧೇಯವಾಗಿದ್ದ ಮಂತ್ರಗಳನ್ನೆಲ್ಲ ವಿಸರ್ಜಿಸಿಬಿಟ್ಟರು. ಜೀವನದ ನಶ್ವರತೆಯ ಭಯಂಕರ ಸತ್ಯದ ಅರಿವಾಯಿತು. ಅದ್ವೈತದ ನಿಜವಾದ ದರ್ಶನವಾಗಿಬಿಟ್ಟಿತು. ಮನೆಯಲ್ಲಿದ್ದೂ ಮುನಿಯಾದರು ; ಮೌನಿಯಾದರು. ವಾಗ್ಮಿಯಾಗಿದ್ದವರೀಗ ಮಾತೇ ಆಡದೇ ಕೇವಲ ಧ್ಯಾನವಶರಾದರು. ಪವಾಡಗಳನ್ನೆಸಗಿ ಜನರನ್ನು ಬೆರಗು ಗೊಳಿಸುತ್ತಿದ್ದ ಶ್ರೌತ್ರಿಗಳು ಇನ್ನು ಮುಂದೆ ತಮ್ಮ ಹೆಸರನ್ನು ಕಪ್ಪಣ್ಣ ಶಾಸ್ತ್ರಿಗಳೆಂದು ಮಾತ್ರ ಕರೆಯಬೇಕೆಂದು ನಿರ್ದೇಶಿಸಿದರು !! ಹತ್ತು ಮಾತಿಗೆ ಒಂದುತ್ತರ ಕೊಡುತ್ತಿದ್ದರು. ಅವರ ಈ ವಿಪರೀತಗಳು ಎಲ್ಲರಿಗೂ ಆಶ್ಚರ್ಯ ಭಯಗಳನ್ನು ತಂದಿತು. ಒಮ್ಮೆ ತಿಂಗಳ ಕಾಲ ಮಾತೇ ಆಡಲಿಲ್ಲ. ಸದಾ ಕಾಲ ಯಾವುದೋ ಚಿಂತೆಯಲ್ಲಿ ಮುಳುಗಿಹೋದಂತೆ, ಯಾರೊಡನೆಯೋ ಮಾತಡುತ್ತಿರುವಂತೆ !
ಇದ್ದಕ್ಕಿದ್ದಂತೆಯೇ ಒಂದು ದಿನ ಬೆಳಗೆದ್ದು ಕೂಗಾಡಹತ್ತಿದರು “ಜಗದ್ಗುರುಗಳು ಬರುತ್ತಿದ್ದಾರೆ, ಸಿದ್ಧಮಾಡಿಕೊಳ್ಳಿ” ಎಂದು. ಹಿಂದೆ ಮುಂದೆ ಗೊತ್ತಿಲ್ಲದ ಆಶ್ರಮವಾಸಿಗಳು ದಿಗ್ಭ್ರಾಂತರಾಗಿ ಅವರು ಹೇಳಿದುದನ್ನು ಮಾಡ ಹತ್ತಿದರು. “ಶಿಬಿಕೆ ಬೇಕು, ಪಂಚ ಫಲಗಳು ಬೇಕು, ಪಾದಪೂಜೆಗೆ ಸಿದ್ಧ ಮಾಡಿಕೊಳ್ಳಿ. ಪುರೋಹಿತರಿಗೆ ಹೇಳಿ. ಯತಿಭಿಕ್ಷೆಗೆ ಸಿದ್ಧಮಾಡಿ. ಮಡಿಯಲ್ಲಿ ಜಾಗ್ರತೆ. ಮಂಗಳ ವಾದ್ಯಗಳನ್ನು ಊರ ಗಡಿಗೆ ಕಳಿಸಿ” ಒಂದಾದ ಮೇಲೊಂದು ಆದೇಶಗಳು ! ಏಕೆ ? ಯಾರಿಗಾಗಿ ? ಯಾರು ಬರುತ್ತಿದ್ದಾರೆ ? ಒಂದೂ ಅರಿಯದೇ ಕಕ್ಕಾವಿಕ್ಕಿಯಾಗಿ ಎಲ್ಲರೂ ಹೆದರಿಕೊಂಡು ಅವರ ಆದೇಶದಂತೆ ನಡೆದರು.
ಅಭಿಜಿನ್ಮುಹೂರ್ತಕ್ಕೆ ಶಿಬಿಕೆಯನ್ನು ಹೊರೆಸಿಕೊಂಡು ಹೋದ ಐದು ನಿಮಿಷಗಳಿಗೆ ದೊಡ್ಡ ದಂಡು ! ನೂರಾರು ಜನ ! ವೇದ ತರಂಗಗಳ ಗುಡುಗು ! ಮಂತ್ರಗಳ ಮಹಾಘೋಷ ! ಪಲ್ಲಕ್ಕಿಯಿಂದ ಇಳಿದವರು ಇಡೀ ದೇಶದಲ್ಲಿ ಪ್ರಖ್ಯಾತವಾಗಿದ್ದ, ಕಾಲಟಿಯಲ್ಲಿ ಭಗತ್ಪಾದರ ಜನ್ಮಸ್ಥಳವನ್ನು ಪರಿಶೋಧಿಸಿ ಭವ್ಯ ದೇಗುಲವನ್ನು ಕಟ್ಟಿಸಿದ್ದ, ಶ್ರೀ ಶಂಕರ ಜಯಂತಿಗಳನ್ನು ಆರಂಭ ಮಾಡಿಸಿದ್ದ, ಶೃಂಗಗಿರಿಯ ಮಹಾ ಸನ್ನಿಧಾನ ಶ್ರೀ ಶ್ರೀ ಶಿವಾಭಿನವ ನೃಸಿಂಹ ಭಾರತೀ ಮಹಾಸ್ವಾಮಿಗಳು !! ಇಬ್ಬರೂ ಮಾತನಾಡಿಕೊಂಡಿದ್ದಂತೆ ತುಲಸೀ ಹಾರಾರ್ಪಣೆಯಾದ ಮೇಲೆ ಶಾಸ್ತ್ರಿಗಳ ಮಠಕ್ಕೆ ಜಗದ್ಗುರುಗಳು ಆಗಮಿಸಿದುದೂ ಆಯಿತು. ಪಾದಪೂಜೆಯೂ ಆಯಿತು. ಆಶೀರ್ವಚನವೂ ಆಯಿತು. ಗಣಹೋಮವೂ ಮುಗಿಯಿತಿ. ಭಿಕ್ಷಾ ಸ್ವೀಕಾರವೂ ಆಯಿತು. ಕೊನೆಗೆ ಕಪ್ಪಣ್ಣ ಶಾಸ್ತ್ರಿಗಳೂ ಜಗದ್ಗುರುಗಳೂ ಕೋಣೆಯೊಳ ಹೊಕ್ಕು ಘಂಟೆ ಕಾಲ ಏನೋ ಪರಮಾರ್ಥವನ್ನು ಚರ್ಚಿಸಿದರು. ಸಂಜೆಯ ಮೇಲೆ ಜಗದ್ಗುರುಗಳು ನಿರ್ಗಮಿಸಿದರು. ಮಹಾ ಯೋಗಿಗಳಾಗಿದ್ದವರು ಶ್ರೀ ಶ್ರೀ ಶಿವಾಭಿನವ ನೃಸಿಂಹ ಭಾರತೀ ಮಹಾಸ್ವಾಮಿಗಳು. ಇವರ ಶಿಷ್ಯರೇ ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು. ಅವರಿಗೂ ಯೌಗಿಕ ರಹಸ್ಯಗಳನ್ನು ಹೇಳಿಕೊಡುವ ಮುನ್ನವೇ ಶ್ರೀ ಕಪ್ಪಣ್ಣ ಶಾಸ್ತ್ರಿಗಳಿಗೆ ಉಪದೇಶಿಸಿದ್ದರು ಶಿವಾಭಿನವ ನೃಸಿಂಹ ಭಾರತಿಗಳು !!
*****
ಮಾರನೆಯ ದಿನದಿಂದಲೇ ಕಪ್ಪಣ್ಣ ಶಾಸ್ತ್ರಿಗಳಲ್ಲಿ ತೀವ್ರ ಬದಲಾವಣೆ. ತಾಟಸ್ಥ್ಯವಿದ್ದದ್ದು ಈಗ ಶುದ್ಧ ವೈರಾಗ್ಯ ! ದೇವರ ಪೂಜೆ ಮಾಡಿದರೆ ಮಾಡಿದರು ; ಬಿಟ್ಟರೆ ಬಿಟ್ಟರು. ಮಾತು ಆಡಿದರೆ ಆಡಿರು ; ಇಲ್ಲದಿದ್ದರೆ ಇಲ್ಲ. ಶಾಸ್ತ್ರಗಳನ್ನೋದಿದರೆ ಓದಿದರು ; ಇಲ್ಲದಿದ್ದರೆ ಇಲ್ಲ. ಮಾತೇ ಹೆಚ್ಚಿಲ್ಲ. ಬರುಬರುತ್ತ ಅವರು ಸದಾಶಿವ ಬ್ರಹ್ಮೇಂದ್ರರಂತಾಗಿಬಿಟ್ಟರು. ಬಟ್ಟೆಗಳನ್ನು ಬಿಟ್ಟು ನಿರ್ವಾಣರಾಗಿಯೇ ಇರುತ್ತಿದ್ದರು ; ಶಾಶ್ವತ ಪ್ರಯಾಣಕ್ಕೆ ಸಿದ್ಧರಾಗುತ್ತಿದ್ದರು. ಸದಾ ಜ್ಞಾನ ಮುದ್ರೆಯಲ್ಲಿ ಸದಾ “ಸೋಹಂ” ಮಂತ್ರ ಜಪಾನುಷ್ಠಾನ ತತ್ಪರರಾಗಿದ್ದರು. ಅದೊಂದು ದಿನ ಪರಿವಾರದವರನ್ನೆಲ್ಲ ಕರೆದು ಆಜ್ಞಾಪಿಸಿದರು !! “ಬೃಂದಾವನ ತಯಾರಾಗಲಿ ! ನಾನು ಜೀವಂತ ಸಮಾಧಿಗೆ ತೆರಳುತ್ತೇನೆ. ಕೈನ ರುದ್ರಾಕ್ಷಿ ಮಾಲೆ ಕೆಳಕ್ಕೆ ಬೀಳುತ್ತಿದ್ದಂತೆಯೇ ಮುಚ್ಚಿಬಿಡಿ”
ಈಗಲೂ ಚನ್ನರಾಯಪಟ್ಟಣದಲ್ಲಿ ಶ್ರೀ ಕಪ್ಪಣ್ಣ ಶಾಸ್ತ್ರಿಗಳ ಜೀವಂತ ಅಧಿಷ್ಠಾನವಿದೆ. ಅಲ್ಲಿ ಸಾಯಂಪ್ರಾತಃಕಾಲದಲ್ಲಿ,
“ಜಗದ್ಗುರು ಜಗನ್ನಾಥ ಗುರು ಜಗ ವಿಷ್ಣುಗುರು /
ಕಪ್ಪಣ್ಣ ಸದ್ಗುರುವೇ ನಮಃ” ಎಂಬ ಸ್ತೋತ್ರ ಮೊಳಗುತ್ತಿರುತ್ತದೆ.
****
